ಅಮೆರಿಕನ್ನಡ
Amerikannada
ಮತ್ತೆ ಬಂತು ಯುಗಾದಿ
-ಜಯಪ್ಪ ಹೊನ್ನಾಳಿ
ಬಂತು ಬಂತು ಮತ್ತೆ ಬಂತು, ಯುಗವ ಕಳೆದು ಯುಗಾದಿ!
ತಂತು ತಂತು ಹೊಸತು ತಂತು, ಸೃಷ್ಟಿ ಮಾಡಿ ಅನಾದಿ!
ಎಲೆಯುದಿರಿಸಿ ನಿಂತ ಮರವು, ಆಗಿಹೋಯ್ತು ಬೆತ್ತಲೆ!
ಚೈತ್ರ ಕರೆಸಿ ಚಿತ್ರ ಬರೆಸಿ, ಸೀರೆ ಉಡಿಸಿತಾಗಲೆ!

ಮುದಿತನದಲು ಮರದಲಿಂತು, ಚಿಗುರಿ ಬಂತು ಚಿಗುರು!
ಹಳೆಯ ಬೇರು ಸತ್ತ್ವಹೀರಿ, ತುಂಬಿ ತಂತು ಒಗರು!
ನಂದನವನದಂತೆ ಚೆಂದ, ಬುವಿಯ ಬನವ ಮಾಡಿದೆ!
ಹಳೆಯದನ್ನು ಹುಡುಕಿ ತೆಗೆದು, ಹೊಸತನೆಲ್ಲ ದೂಡಿದೆ!

ಮಾವು ಬೇವು ಜೊತೆಗೆ ತಂದು, ಎರಡೂ ಮಾಡಿ ಒಂದು
ಸಿಹಿಯು ಕಹಿಯು ಸೇರೆ ಬದುಕು, ಸಮರಸವು ಎಂದು
ನುಗ್ಗೆಕಾಯಿ ನುಗ್ಗಿನಿಂದು, ಕಾಮನನ್ನು ಕರೆಸಿದೆ
ಲೋಕಸೃಷ್ಟಿ ಸಾಗಲೆಂದು, ಒಲವನೆಲ್ಲ ಸುರಿಸಿದೆ

ತುಂಬಿ ಹೂವ ಹೃದಯ ಮೀಟಿ, ನುಡಿಯುತಿಹದು ವೀಣೆಯ
ಮಾಂದಳಿರಿನ ಮರೆ ಹಾಡಿದೆ, ಕುಹು ಕುಕೂಲ ಉಲಿಯ
ಚಿಗುರು ಹೂವು ಹೀಚು ಹಣ್ಣು, ತುಂಬಿ ನಿಂತು ಕಣ್ಣು!
ಕೋರೈಸಿದೆ ಹಾರಯಸಿದೆ, ನೀನಿದನೆ ಉಣ್ಣು!

ಬದುಕು ಹಳತು ಭಾವ ಹೊಸತು, ಆಗೆ ನಿತ್ಯ ನೂತನ
ಮನಸು ಮಸೆದು ಹೃದಯ ಹೊಸೆದು, ಹಾಡೆ ನವನವೀನ
ಬರುತಲಿರಲಿ ಬರಲಿ, ಎಲ್ಲರಲ್ಲಿ ನೂರು ಯುಗಾದಿ!
ಬಾಳ ಪಯಣ ಸಾಗಿಸಿರಲಿ, ಹಾಸ ಹರಸಿ ಹಾದಿ!


ನಿಮ್ಮ ಪ್ರತಿಕ್ರಿಯೆ

  ಹೆಸರು*
  ಇ-ಮೇಲ್*
Type in Kannada (Press Ctrl+g to toggle between English and Kannada)