ಅಮೆರಿಕನ್ನಡ
Amerikannada
ಸ್ತ್ರೀವಾದ: ಒಂದು ಅವಲೋಕನ
ಶ್ವೇತಾ ಶಮ೯, ಮೈಸೂರು
‘ಸ್ತ್ರೀವಾದ’ ಎಂಬ ಪರಿಕಲ್ಪನೆಯನ್ನು ಕುರಿತಂತೆ ಸಾಮಾನ್ಯವಾಗಿ ಅಪಕಲ್ಪನೆಯ ಹಾಗೂ ಅಪನಂಬಿಕೆಯ ಗ್ರಹಿಕೆ ಇದೆ. ‘ಸ್ತ್ರೀವಾದ’ಎಂದರೆ ‘ಪುರುಷವಿರೋಧಿವಾದ’ಎಂದಾಗಲೀ ‘ಪುರುಷದ್ವೇಷಿಗಳು ಪ್ರತಿಪಾದಿಸುವವಾದ’-ಎಂದಾಗಲೀ ಅಲ್ಲ. ಸ್ತ್ರೀವಾದಿಗಳು ಎಂದರೆ ಸ್ವೇಚ್ಛಾಚಾರಿಗಳು, ಅತಿ ಕ್ರಾಂತಿಕಾರಕ ಮೌಲ್ಯಗಳನ್ನು ಪ್ರತಿಪಾದಿಸುವವರು, ಸ್ವಚ್ಛಂದ ಜೀವನ ನಡೆಸುವವರು, ಸಾಂಸಾರಿಕ ಬದುಕನ್ನು ಅಲಕ್ಷಿಸುವವರು- ಎಂಬ ಆರೋಪಗಳೂ ಇವೆ.
ಸಮಾಜದಲ್ಲಿ ಲಿಂಗಾಧಾರಿತ ಅಸಮಾನತೆಯಿದೆ- ಎಂಬ ವಿಷಯದ ಬಗ್ಗೆ ಅರಿವನ್ನು ಮೂಡಿಸಿಕೊಂಡು ಸಮಾಜದ ವಿವಿಧ ಸಂಸ್ಥೆಗಳಲ್ಲಿ ಸ್ತ್ರೀಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯ ಹಾಗೂ ಶೋಷಣೆಗಳನ್ನು ಮನಗಂಡು ಈ ಪ್ರವೃತ್ತಿಗಳನ್ನು ಕೊನೆಗಾಣಿಸಲು ನಡೆಸುವ ಎಲ್ಲ ಉದ್ದೇಶಿತ ಪ್ರಾಮಾಣಿಕ ಪ್ರಯತ್ನಗಳನ್ನು ‘ಸ್ತ್ರೀವಾದ’ ಎಂದು ಕರೆಯಬಹುದು. ಈ ಅರ್ಥದಲ್ಲಿ ಸ್ತ್ರೀವಾದ ಒಂದು ವಿಚಾರಧಾರೆಯೂ ಹೌದು ಒಂದು ಜೀವನಕ್ರಮವೂ ಹೌದು. ಶೋಷಣೆಯ ವಿರುದ್ಧದ ಹೋರಾಟದಲ್ಲಿ ಸ್ತ್ರೀವಾದಿಗಳು ಅಳವಡಿಸಿಕೊಳ್ಳುವ ಒಂದು ಸೈದ್ಧಾಂತಿಕ ಕ್ರಮವೂ ಸ್ತ್ರೀವಾದವೇ. ಒಟ್ಟಿನಲ್ಲಿ ಸ್ತ್ರೀಪರ ವಿಚಾರಗಳಲ್ಲಿ ಕಾಳಜಿಯನ್ನು ಹೊಂದಿರುವ ಹಾಗೂ ಸ್ತ್ರೀ ಸಂಬಂಧಿ ವಿಚಾರಗಳಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಂಡಿರುವ ಸ್ತ್ರೀಯರು ಮತ್ತು ಪುರುಷರನ್ನು ‘ಸ್ತ್ರೀವಾದಿ’ಗಳೆಂದೂ ಅವರ ದೃಷ್ಟಿಕೋನವನ್ನು ‘ಸ್ತ್ರೀವಾದ’ಎಂದೂ ಹೇಳಬಹುದು.
ಒಟ್ಟಾರೆಯಾಗಿ ಸ್ತ್ರೀವಾದ ಎಂದರೆ ಮೂಲಭೂತವಾಗಿ ಸಮಾಜದಲ್ಲಿನ ಸ್ತ್ರೀಶೋಷಣೆಯ ಹಾಗೂ ದಮನವನ್ನು ಕುರಿತ ಪ್ರಜ್ಞಾಪೂರ್ವಕ ಎಚ್ಚರ. ಕುಟುಂಬ ಮತ್ತು ಕುಟುಂಬದಾಚೆಗಿನ ಪರಿಸರದಲ್ಲಿ ನಡೆಯುವ ಸ್ತ್ರೀ ಶೋಷಣೆಯ ಸಿದ್ಧ ಸ್ಥಿತಿಯನ್ನು ಕದಲಿಸುವ ಪ್ರಯತ್ನಗಳಿಗೆ ಚೈತನ್ಯವನ್ನು ಸ್ತ್ರೀವಾದ ನೀಡುತ್ತದೆ. ಸ್ತ್ರೀಯನ್ನು ಕುರಿತ ಗ್ರಹಿಕೆ, ವಿವರಣೆ, ವಿಶ್ಲೇಷಣೆ, ಪುನರ್‌ಮೌಲ್ಯೀಕರಣ ಪ್ರಯತ್ನಕ್ಕೆ ಸೂಕ್ತವಾದ ತಾತ್ವಿಕತೆಯನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯೇ ಸ್ತ್ರೀವಾದ. ಈ ನಿಟ್ಟಿನಲ್ಲಿ ಮಹಿಳೆಯ ಬಗೆಗಿನ ಪುರುಷ ನಿರ್ಮಿತ ಸಿದ್ಧ ತಾತ್ವಿಕ ಮಾದರಿಗಳನ್ನು ಎದುರಾಗಿ ಇಟ್ಟುಕೊಂಡೇ ಸ್ತ್ರೀವಾದ ವ್ಯವಹರಿಸುತ್ತದೆ.
ಪ್ರಪಂಚದಾದ್ಯಂತ ಶೋಷಣೆಯು ಕಾಲ, ದೇಶ, ಸಮಾಜಬದ್ಧವಾಗಿ ತನ್ನದೇ ಸ್ಪರೂಪವನ್ನು ಹೊಂದಿದೆ. ಅದಕ್ಕೆ ಹೊಂದಿಕೊಂಡಂತೆ ಚರಿತ್ರೆ ಕಂಡ ಎಲ್ಲಾ ರೀತಿಯ ಶೋಷಣೆಗಳೂ, ಮಹಿಳೆಯಲ್ಲಿ ತನ್ನ ಪರಾಕಾಷ್ಠೆಯೊಂದಿಗೆ ಪ್ರಕಟಗೊಳ್ಳುತ್ತವೆ. ಮಹಿಳೆಯ ಶೋಷಣೆಯ ಐತಿಹಾಸಿಕ ಕಥೆಗನುಗುಣವಾಗಿ ಸ್ತ್ರೀವಾದವೂ ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದುತ್ತಾ ಬಂದಿದೆ. ಎಲ್ಲಿ ಸಾಮಾಜಿಕ ಬದಲಾವಣೆಗಳು ತ್ವರಿತಗತಿಯಲ್ಲಿ ಆಗುತ್ತಾ ಬಂದವೋ ಅಲ್ಲಿ ಸ್ತ್ರೀವಾದದ ಮಜಲುಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಮಹಿಳಾ ಶೋಷಣೆಯ ಸ್ವರೂಪವನ್ನು ತಾತ್ವಿಕ ಶಿಸ್ತಿನ ಅಧ್ಯಯನ ಕ್ರಮವನ್ನಾಗಿ ರೂಪಿಸುವಲ್ಲಿ ಪಾಶ್ಚಾತ್ಯ ಸ್ತ್ರೀವಾದಿಗಳ ಕೊಡುಗೆ ಗಮನಾರ್ಹ. ಈ ಅಧ್ಯಯನ ಕ್ರಮದ ಪ್ರಭಾವ ಮತ್ತು ಪ್ರೇರಣೆಗಳನ್ನು ಜಗತ್ತಿನ ಉಳಿದೆಡೆ ಸಾಕಷ್ಟು ಪರಿಣಾಮಕಾರಿಯಾಗಿಯೇ ಬಳಸಿಕೊಳ್ಳಲಾಗಿದೆ.
ಜನರ ಪ್ರಜ್ಞಾಕ್ರಾಂತಿಯನ್ನು ಗುರಿಯಾಗಿಟ್ಟುಕೊಂಡು ಹೊರಡುವ ಆಧುನಿಕ ಸಿದ್ಧಾಂತಗಳ ನಡುವೆ ಮಹತ್ವದ ಸ್ಥಾನವನ್ನು ಪಡೆದಿರುವ ಪಾಶ್ಚಿಮಾತ್ಯ ಸ್ತ್ರೀವಾದದ ಚಿಂತನೆಗಳು ಸುಮಾರು ಇನ್ನೂರು ವರ್ಷಗಳಿಂದ ಕ್ರಮವಾಗಿ ಬೆಳೆದುಬಂದವು. ಹದಿನೆಂಟನೇ ಶತಮಾನದ ಮೇರಿ ವುಲ್‌ಸ್ಪನ್‌ಕ್ರಾಫ್ಟ್, ೧೯-೨೦ನೇ ಶತಮಾನಗಳ ನಡುವೆ ಇದ್ದ ವರ್ಜೀನಿಯಾ ವುಲ್ಫ್, ೨೦ನೇ ಶತಮಾನದ ಚಿಂತಕಿಯರೆಲ್ಲರ ವಿಚಾರಗಳನ್ನು ಪ್ರಭಾವಿಸಿದ ಸಿಮೋನ್ ದ ಬೋವಾ ಮತ್ತು ಅನಂತರದ ಬ್ರೆಟಿ ಫ್ರೀಡನ್- ಸ್ತ್ರೀವಾದದತ್ತ ಜಗತ್ತಿನ ಗಮನ ಸೆಳೆದ ಕೆಲವು ಮಹತ್ವದ ಲೇಖಕಿಯರು.
ಸ್ತ್ರೀವಾದಕ್ಕೆ ಪಶ್ಚಿಮ ದೇಶಗಳಲ್ಲಿ ತಳಪಾಯ ಕಟ್ಟಿದವರು ಈ ಮಹಿಳೆಯರು, ಆದರೆ ಅವರವರ ಕಾಲದಲ್ಲಿ ತುಂಬಾ ಪ್ರಭಾವಬೀರಿದ್ದ ಪುರುಷರ ಚಿಂತನೆಗಳೇ ಇವರ ಚಿಂತನೆಗಳಿಗೆ ಮುಖ್ಯಪ್ರೇರಣೆ ಎಂಬುದನ್ನು ಗಮನಿಸಬೇಕು. ಮೇರಿವುಲ್‌ಸ್ಟನ್‌ಕ್ರಾಪ್ಟ್ ರುಸೋನ ವಿಚಾರಗಳಿಂದ, ಸಿಮೋನ್ ದ ಬೋವಾ ಸಾರ್ತ್, ಕಾರ್ಲ್ ಮಾರ್ಕ್ಸ್ ಮತ್ತು ಫ್ರಾಯ್ಡನ ತಾತ್ವಿಕ ಸಿದ್ಧಾಂತಗಳಿಂದ ತಮ್ಮ ಚಿಂತನೆಗಳಿಗೆ ಪ್ರೇರಣೆ ಪಡೆದದ್ದು ಇಂದು ಬೌದ್ಧಿಕ ಲೋಕದಲ್ಲೆಲ್ಲಾ ತಿಳಿದಿರುವ ಸಂಗತಿ. ಕೇಟ್ ಮಿಲೆಟ್‌ಳ ಲಿಂಗರಾಜಕೀಯ ಸಿದ್ಧಾಂತದ ಹಿಂದೆ ಆ ಕಾಲದ ಅಮೇರಿಕದ ವಿಶ್ವವಿದ್ಯಾಲಯಗಳಲ್ಲಿ ಗಾಢವಾಗಿದ್ದ ‘’ನ್ಯೂ ಕ್ರಿಟಿಸಿಸಂ’ ವಾದಿಗಳಾದ ಪುರುಷರ ಧೋರಣೆಗಳೇ ಪ್ರೇರಣೆಗಳಾಗಿದ್ದವು.
ಸ್ತ್ರೀವಾದಕ್ಕೆ ಎರಡು ಮುಖ್ಯ ಆಯಾಮಗಳಿವೆ
1) ವಾಸ್ತವ ಜೀವನದಲ್ಲಿ ಮಹಿಳೆಯರು ಎದುರಿಸುತ್ತಿರುವ ಭೌತಿಕ ಶೋಷಣೆಗಳನ್ನು ಅವುಗಳಿಗೆ ಕಾರಣವಾಗಿರುವ ವ್ಯವಸ್ಥೆಯನ್ನು ಸಂಘಟಿತ ಸಾಮಾಜಿಕ ರಾಜಕೀಯ ಹೋರಾಟಗಳ ಮೂಲಕ ಪ್ರತಿಭಟಿಸುವುದು ಸ್ತ್ರೀವಾದದ ಒಂದು ಆಯಾಮ.
2) ಸಂಸ್ಕೃತಿ ಮೀಮಾಂಸೆಯ ಒಂದು ಅಂಗವಾಗಿ ಸಾಹಿತ್ಯ ಕಲೆಗಳ ಸ್ತ್ರೀವಾದಿ ವಿಮರ್ಶೆ, ವಿಶ್ಲೇಷಣೆಗೆ ಯತ್ನಿಸುವುದು ಅದರ ಇನ್ನೊಂದು ಆಯಾಮ. ಮೇರಿವುಲ್‌ಸ್ಟನ್ ಕ್ರಾಫ್ಟ್‌ಳಿಂದ ಹಿಡಿದು ಜರ್ಮನ್ ಗ್ರೀಕರವರೆಗೆ ಪ್ರತಿಯೊಬ್ಬರೂ ಸ್ತ್ರೀವಾದದ ರಾಜಕೀಯ ಸಿದ್ಧಾಂತವನ್ನು ಹೇಳುವ ತಮ್ಮ ತಮ್ಮ ವಿಚಾರಗಳಿಗೆ ಸಾಹಿತ್ಯ ವಿಶ್ಲೇಷಣೆಯ ಮೂಲಕ ಅವಶ್ಯಕ ಸಮರ್ಥನೆ ನಿದರ್ಶನಗಳನ್ನು ಪಡೆದುಕೊಳ್ಳುತ್ತಾರೆಂಬುದು ಗಮನಾರ್ಹ.
ಎಲ್ಲ ಸ್ತ್ರೀವಾದಿಗಳೂ ಸ್ತ್ರೀಪರ ಕಾಳಜಿಯನ್ನು ಹೊಂದಿದ್ದರೂ ಅವರು ಅಳವಡಿಸಿಕೊಳ್ಳುವ ವಿಧಾನಗಳಲ್ಲಿ ಅವರ ದೃಷ್ಟಿಕೋನಗಳಲ್ಲಿ ಭಿನ್ನತೆ ಕಂಡುಬರುತ್ತದೆ. ಹೀಗಾಗಿ ಸ್ತ್ರೀವಾದಿ ನಿಲುವುಗಳಲ್ಲಿ ಉದಾರವಾದಿ ಸ್ತ್ರೀವಾದ, ಮಾರ್ಕ್ಸ್‌ವಾದಿ ಸ್ತ್ರೀವಾದ, ತೀವ್ರಗಾಮಿ ಸ್ತ್ರೀವಾದ, ಮನೋವಿಶ್ಲೇಷಣಾತ್ಮಕ ಸ್ತ್ರೀವಾದ, ಸಮಾಜವಾದಿ ಸ್ತ್ರೀವಾದ, ಆಧುನಿಕೋತ್ತರ ಸ್ತ್ರೀವಾದ, ಅಸ್ಥಿತ್ವವಾದಿ ಸ್ತ್ರೀವಾದ - ಹೀಗೆ ಪ್ರಮುಖವಾಗಿ ಏಳು ಬಗೆಗಳನ್ನು ಗುರುತಿಸುತ್ತಾರೆ.
ಸ್ತ್ರೀವಾದದ ಗುರಿಗಳು ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಕಂಡಿವೆ. ಸ್ತ್ರೀವಾದದ ಪ್ರಾರಂಭಿಕ ಹಂತಗಳಲ್ಲಿ ಸ್ತ್ರೀವಾದಿಗಳು ಸ್ತ್ರೀ ಶೋಷಣೆಯನ್ನು ಕೊನೆಗಾಣಿಸಲು ಕಾನೂನು ರೀತ್ಯಾ ಹಕ್ಕುಗಳನ್ನು ಪಡೆಯುವುದರತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಶಿಕ್ಷಣ, ಉದ್ಯೋಗ, ಆಸ್ತಿಯ ಹಕ್ಕು, ಮತಚಲಾವಣೆ, ಪ್ರಜಾಸತ್ತಾತ್ಮಕ ಸರ್ಕಾರದಲ್ಲಿ ಭಾಗವಹಿಸುವಿಕೆ, ವಿವಾಹ ವಿಚ್ಛೇದನ, ಸಂತಾನ ನಿಯಂತ್ರಣ - ಇವೇ ಮುಂತಾದ ಕ್ಷೇತ್ರಗಳಲ್ಲಿ ಹಕ್ಕುಗಳನ್ನು ಪಡೆಯಲು ಸ್ತ್ರೀವಾದಿಗಳು ಹೋರಾಟವನ್ನು ನಡೆಸಿದ್ದರು. ಇಂದು ಇವುಗಳಲ್ಲಿ ಬಹುತೇಕ ಹಕ್ಕುಗಳು ಸ್ತ್ರೀಯರಿಗೆ ತಾತ್ವಿಕವಾಗಿ ಸಿಕ್ಕಿದ್ದರೂ ಆಚರಣೆಯಲ್ಲಿ ಪೂರ್ಣವಾಗಿ ಸಿಕ್ಕಿಲ್ಲ.
ಕಾನೂನಿನ ಮೂಲಕ ಸ್ತ್ರೀವಿರೋಧಿ ಮೌಲ್ಯಗಳನ್ನು ಸಮಾಜದಿಂದ ತೊಡೆದು ಹಾಕಲು ಸಾಧ್ಯವಾಗದಿದ್ದಾಗ ಸ್ತ್ರೀವಾದಿಗಳ ಹೋರಾಟದ ವ್ಯಾಪ್ತಿ ಹೆಚ್ಚಾಯಿತು. ಹೋರಾಟಕ್ಕಾಗಿ ಬಳಸಲ್ಪಟ್ಟ ಅಸ್ತ್ರಗಳ ತೀಕ್ಷ್ಣತೆಯೂ ಹೆಚ್ಚಾಯಿತು. ಸಮಕಾಲೀನ ಸ್ತ್ರೀವಾದ ಸ್ತ್ರೀಗೆ ಸಂಪೂರ್ಣ ಸಮಾನತೆಯನ್ನು ತರುವತ್ತ ತನ್ನ ಗಮನವನ್ನು ಹರಿಸಿದೆ. ಸ್ತ್ರೀ ಸಮಾನತೆಗೆ ಅಡ್ಡಿಯಾಗುವ ಪ್ರವೃತ್ತಿಗಳು ಸಮಾಜದ ಯಾವುದೇ ಸಂಸ್ಥೆಯಲ್ಲಿ ಯಾವುದೇ ರೂಪದಲ್ಲಿ ಕಂಡುಬಂದರೂ ಅದರ ನಿವಾರಣೆ ಸ್ತ್ರೀವಾದದ ಉದ್ದೇಶವಾಗಿದೆ. ಕೌಟುಂಬಿಕ, ಧಾರ್ಮಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ, ಮೂಲಭೂತವಾದದಲ್ಲಿ, ಸಮೂಹ ಮಾಧ್ಯಮಗಳಲ್ಲಿ, ಒಟ್ಟಾರೆ ಸಾಂಸ್ಕೃತಿಕ ಮೌಲ್ಯವ್ಯವಸ್ಥೆಯಲ್ಲಿ ಪರಂಪರಾನುಗತವಾಗಿ ಒಳಹೂಕ್ಕು ಅಂತರ್ಗತವಾಗಿಸಿಕೊಂಡು ಬಂದಿರುವ ಸ್ತ್ರೀವಿರೋಧಿ ಪ್ರವೃತ್ತಿಗಳನ್ನು, ಪುರುಷಪ್ರಧಾನ ವ್ಯವಸ್ಥೆಯನ್ನು ಎದುರಿಸುವುದು ಇಂದಿನ ಸ್ತ್ರೀವಾದದ ಪ್ರಮುಖ ಗುರಿಯಾಗಿದೆ. ಸ್ತ್ರೀ ಸಮಾನತೆಯನ್ನು ಕೇವಲ ಕಾನೂನು- ಕಾಯಿದೆಗಳಿಂದ ಅಥವಾ ಮೇಲುಮೇಲಿನ ಪ್ರಯತ್ನಗಳಿಂದ ತರಲು ಸಾಧ್ಯವಿಲ್ಲ. ಸಮಾಜದ ವ್ಯವಸ್ಥೆಯಲ್ಲಿ ವಿವಿಧ ಪದರಗಳಲ್ಲಿ ಹಾಸು ಹೊಕ್ಕಾಗಿರುವ ಲಿಂಗಾಧಾರಿತ ಅಸಮಾನತೆಯನ್ನು ಪ್ರಶ್ನಿಸಿ, ಪ್ರತಿಭಟಿಸಿ ಕಿತ್ತೊಗೆದಾಗ ಮಾತ್ರ ಸ್ತ್ರೀ ಸಮಾನತೆಯ ಹೋರಾಟಕ್ಕೆ ಒಂದು ಅರ್ಥಪೂರ್ಣತೆ ಬರುತ್ತದೆ ಎಂಬುದು ಸಮಕಾಲೀನ ಸ್ತ್ರೀವಾದದ ಧ್ಯೇಯವಾಗಿದೆ.
ಸ್ತ್ರೀವಾದದ ಸಮಾನತೆಗಾಗಿ ಸಂಘರ್ಷವನ್ನು ನಡೆಸುವುದರ ಜೊತೆಜೊತೆಗೆ ಸಮಾನತೆ ಹಾಗೂ ನ್ಯಾಯಸಮ್ಮತೆಯ ತತ್ವಗಳನ್ನು ಆಧರಿಸಿದ ಬದುಕನ್ನು ನಡೆಸಲು ಸ್ತ್ರೀ ಪುರುಷರಿಬ್ಬರಿಗೂ ಹಕ್ಕುಗಳು ದೊರೆಯಬೇಕೆಂಬ ಆಶಯವನ್ನು ಸ್ತ್ರೀವಾದಿಗಳು ಹೊಂದಿದ್ದಾರೆ. ಸ್ತ್ರೀಯ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯಕ್ಕೆ ತಾವು ಎಷ್ಟು ಮನ್ನಣೆಯನ್ನು ನೀಡುವರೋ ಅಷ್ಟೇ ಮಹತ್ವವನ್ನು ಸ್ತ್ರೀವಾದಿಗಳು ಪುರುಷರ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಗಳಿಗೂ ನೀಡಿದ್ದಾರೆ. ಆದುದರಿಂದ ಸ್ತ್ರೀವಾದಿಗಳಿಗೆ ಪುರುಷರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕಾಳಜಿ ಇಲ್ಲ ಎಂದಾಗಲೀ ಪುರುಷರ ಬದುಕಿನಲ್ಲಿ ತಲೆದೋರುವ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಸಹೃದಯತೆ ಇಲ್ಲವೆಂದಾಗಲೀ ಅರ್ಥೈಸಬಾರದು.
ಸ್ತ್ರೀಯೆಂಬ ಏಕೈಕ ಕಾರಣಕ್ಕಾಗಿ ದುಡಿಮೆಗೆ ತಕ್ಕ ಪ್ರತಿಫಲದಿಂದ ವಂಚಿತರಾಗುವುದು, ಅನೇಕಬಾರಿ ಲೈಂಗಿಕ ದುರಾಚಾರಗಳಿಗೆ ಒಳಗಾಗುವುದು, ಮನೆಯೊಳಗಿನ ದುಡಿಮೆಯನ್ನು ದುಡಿಮೆಯೆಂದು ಪರಿಗಣಿಸದೆ ಇರುವುದು, ಮನೆಯಲ್ಲಿಯೂ ಪುರುಷರ ಧೌರ್ಜನ್ಯಕ್ಕೆ ಒಳಗಾಗುವುದು - ಮೊದಲಾದ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಎಲ್ಲಾ ಬಗೆಯ ತಾರತಮ್ಯವೂ ಹೋರಾಟಯೋಗ್ಯವಾದರೂ ಅದರ ವಿಶೇಷವಾದ ಸ್ವರೂಪದಿಂದ ಸ್ತ್ರೀ ಸಮಸ್ಯೆಗಳಿಗೆ ಇದುವರೆಗೂ ಸಮರ್ಪಕವಾದ ಪರಿಹಾರಗಳು ದೊರೆತಿಲ್ಲ. ಆದ್ದರಿಂದ ಸ್ತ್ರೀವಾದಿಗಳು ಲಿಂಗಾಧಾರಿತ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು.
ಸ್ತ್ರೀವಾದವನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಂದು ಟೀಕಿಸುವವರೂ ಇದ್ದಾರೆ. ಆದರೆ ಸ್ತ್ರೀವಾದವನ್ನು ಯಾವುದೇ ಸಂಸ್ಕೃತಿಯ ಅಂಧಾನುಕರಣೆ ಎಂದು ಪರಿಗಣಿಸುವುದು ತಪ್ಪಾಗುತ್ತದೆ. ಸ್ತ್ರೀ ವಿರೋಧಿ ಮೌಲ್ಯಗಳು ಎಲ್ಲ ಸಂಸ್ಕೃತಿಗಳಲ್ಲೂ ಹಾಸು ಹೊಕ್ಕಾಗಿವೆ. ಇದಕ್ಕೆ ಪಾಶ್ಚಿಮಾತ್ಯ ಸಮಾಜವೇನೂ ಹೊರತಾಗಿಲ್ಲ. ಲಿಂಗಾಧಾರಿತ ತಾರತಮ್ಯದ ಸ್ವರೂಪ ಬೇರೆ ಬೇರೆ ಸಮಾಜಗಳಲ್ಲಿ ಬೇರೆ ಬೇರೆ ರೂಪಗಳಲ್ಲಿದ್ದು ಅದು ಸಾರ್ವತ್ರಿಕವಾದುದಾಗಿದೆ. ಇಂದಿಗೂ ಬಹುತೇಕ ಸ್ತ್ರೀಯರ ಜೀವನ ಒಂದಲ್ಲಾ ಒಂದು ರೀತಿಯಲ್ಲಿ ಅನೇಕ ಬಗೆಯ ಸಂಕೋಲೆಗಳಿಂದ ಬಂಧಿತವಾಗಿದೆ. ಮಾನವ ಜೀವನದ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಉದ್ಯೋಗ, ಆರೋಗ್ಯ, ಅಭಿವ್ಯಕ್ತಿ, ಸ್ವಾತಂತ್ರ್ಯ- ಇವೇ ಮೊದಲಾದ ಹಕ್ಕುಗಳಿಂದ ಅನೇಕ ಸ್ತ್ರೀಯರು ಇಂದಿಗೂ ವಂಚಿತರೇ. ಇಂಥವರ ಬಗ್ಗೆಯೇ ಸ್ತ್ರೀವಾದಿಗಳ ಕಾಳಜಿ ಮತ್ತು ಹೋರಾಟವಿದೆ. ಶಿಕ್ಷಣ, ಉದ್ಯೋಗ ಪಡೆದ ಮಾತ್ರಕ್ಕೆ ಸ್ತ್ರೀ ಸ್ವತಂತ್ರಳೆಂದು ಭಾವಿಸಲಾಗದು. ತನ್ನ ದೇಹ, ತನ್ನ ದುಡಿಮೆ ಹಾಗೂ ತನ್ನ ನಿರ್ಧಾರಗಳು ಇವುಗಳ ಮೇಲೆ ಸಂಪೂರ್ಣ ಸ್ವಾಮ್ಯವನ್ನು ಪಡೆದ ಸ್ತ್ರೀ ಮಾತ್ರ ಸ್ವತಂತ್ರಳು. ಬಹುತೇಕ ಸ್ತ್ರೀಯರಿಗೆ ಈ ಅರ್ಥದಲ್ಲಿ ಸ್ವಾತಂತ್ರ್ಯ ದೊರೆಯುವವರೆಗೂ ಸ್ತ್ರೀವಾದಿಗಳ ಹೋರಾಟ ಮುಂದುವರೆಯುತ್ತದೆ.
ಸ್ತ್ರೀ ಪುರುಷ ಸಮಾನತೆಗೆ ಅಡ್ಡಿ ಬಂದಿರುವ ಪ್ರಮುಖ ಕಾರಣ ಆಕೆಯ ದೇಹರಚನೆಯೇ ಆಗಿದೆ ಎಂಬ ವಾದ ಇಂದಿಗೂ ಇದೆ. ಪುರುಷನ ಹಾರ್ಮೋನುಗಳು ಆತನನ್ನು ಒಬ್ಬ ಬಲಿಷ್ಠ ಆಕ್ರಮಣಕಾರಿ ದೃಢಕಾಯದ ವ್ಯಕ್ತಿಯನ್ನಾಗಿ ಮಾಡಿದರೆ ಸ್ತ್ರೀಯ ಹಾರ್ಮೋನುಗಳು ಆಕೆಯನ್ನು ಓರ್ವ ಸಾಧುಸ್ವಭಾವದ ಮಾರ್ದವತೆಯ ಭಾವನೆಗಳನ್ನು ಹೊಂದಿದ ಬಲಾಢ್ಯಳಲ್ಲದ ವ್ಯಕ್ತಿಯನ್ನಾಗಿ ಮಾಡುತ್ತವೆ ಎಂಬ ಅಭಿಪ್ರಾಯ ಸ್ತ್ರೀವಾದಿ ಹೋರಾಟಕ್ಕೆ ಒಂದು ಪ್ರಮುಖ ಸವಾಲಾಗಿದೆ. ಸ್ತ್ರೀ ಪುರುಷರ ಅಸಮಾನತೆಯ ‘ಜೈವಿಕ ಮೂಲ’ ಸಿದ್ಧಾಂತವನ್ನು ಸ್ತ್ರೀವಾದಿಗಳು ತಿರಸ್ಕರಿಸುತ್ತಾರೆ. ಏಕೆಂದರೆ ‘ಪುರುಷತ್ವ’ ಮತ್ತು ‘ಸ್ತ್ರೀತ್ವ’ ಎಂಬ ಪರಿಕಲ್ಪನೆಗಳು ಮಾನಸಿಕ ಸ್ಥಿತಿಗಳೇ ಹೊರತು ಸಾರ್ವತ್ರಿಕ ವಾಸ್ತವಗಳಲ್ಲ. ನಮ್ಮ ಸಾಮರ್ಥ್ಯಗಳು ಅಥವಾ ದೌರ್ಬಲ್ಯಗಳು ನಮಗೆ ಜೀವನದಲ್ಲಿ ದೊರೆಯುವ ಅಥವಾ ದೊರೆಯದಿರುವ ಅವಕಾಶಗಳಿಂದ ಪ್ರಭಾವಿತವಾಗಿರುವಂಥವು. ಪುರುಷಕೇಂದ್ರಿತ ಸಾಮಾಜಿಕ ಮೌಲ್ಯಗಳು ಅನೇಕ ಸ್ತ್ರೀಯರಲ್ಲಿ ಕೀಳರಿಮೆಯ, ಪರಾಧೀನತೆಯ ಅಥವಾ ದುರ್ಬಲತೆಯ ಭಾವನೆಗಳನ್ನು ಮೂಡಿಸುತ್ತವೆ. ಸ್ತ್ರೀ ಪುರುಷರ ಮೂಲ ಪ್ರವೃತ್ತಿಗಳು ಎಂದು ಗುರುತಿಸಲ್ಪಟ್ಟಿರುವ ಅನೇಕ ಲಕ್ಷಣಗಳು ನಮ್ಮ ಸಾಂಸ್ಕೃತಿಕ ಮೌಲ್ಯವ್ಯವಸ್ಥೆಯಿಂದ ಪ್ರಭಾವಿಸಲ್ಪಟ್ಟಿವೆಯೇ ಹೊರತು ಇವು ಸ್ತ್ರೀಯರಿಗೆ ಸಹಜವಾಗಿ ಬಂದಂಥ ಗುಣಗಳಲ್ಲ. ಸ್ತ್ರೀಯ ಜೈವಿಕ ದೌರ್ಬಲ್ಯ ಒಂದು ಸಾಂಸ್ಕೃತಿಕ ಪೂರ್ವಾಗ್ರಹದ ಪ್ರತೀಕವೇ ಹೊರತು ಅದು ಆಕೆಯ ಜೈವಿಕತೆಗೆ ಸಂಬಂಧಿಸಿದ್ದಲ್ಲ ಎನ್ನುವುದು ಸ್ತ್ರೀವಾದಿಗಳ ಖಂಡಿತವಾದ ನಿಲುವು. ಸ್ತ್ರೀಯ ಜೈವಿಕತೆಯನ್ನು ಮುಂದಿಟ್ಟುಕೊಂಡು ಸ್ತ್ರೀಯರು ಮಾಡುವ ಕೆಲಸಗಳನ್ನು ಗೌಣವಾಗಿ ಪರಿಗಣಿಸುವ ಧೋರಣೆ ಬಹುಪಾಲು ಎಲ್ಲ ಸಮೂಹಗಳಲ್ಲೂ ಕಂಡುಬರುತ್ತದೆ. ಉತ್ಪಾದನಾ ಕ್ರಿಯೆಯಲ್ಲಿ ಗೋಚರವಾಗುವಂಥ ಜವಾಬ್ದಾರಿಗಳನ್ನು ಪುರುಷರು ನಿರ್ವಹಿಸುತ್ತಾರೆ. ಆದುದರಿಂದಲೇ ಅವರಿಗೆ ಸಮಾಜ ಕಟ್ಟಿರುವ ಮೌಲ್ಯ ಹೆಚ್ಚಿನದಾಗಿದೆ. ಮನೆಯ ಒಳಗೆ ಇರುವ ಸ್ತ್ರೀಯೇ ಆಗಲಿ, ದೈಹಿಕ ಶ್ರಮವನ್ನು ಬಳಸಿ ಮನೆಯ ಹೊರಗೆ ದುಡಿಯುತ್ತಿರುವ ಸ್ತ್ರೀಯೇ ಆಗಲಿ ಪುರುಷನಿಗೆ ಸಮಾನಳಲ್ಲ ಎಂಬ ಆಧಾರರಹಿತ ಹಾಗೂ ಅರ್ಥಹೀನವಾದ ವಾದಗಳಿಗೆ ಸ್ತ್ರೀವಾದಿಗಳ ಖಂಡನೆ ಇದೆ.
ಸ್ತ್ರೀವಾದಿಗಳು ತಾಯ್ತನವನ್ನು ಕುಟುಂಬವನ್ನು ದ್ವೇಷಿಸುತ್ತಾರೆ, ಸ್ತ್ರೀ ಪುರುಷರ ಸಮಾನತೆಯನ್ನು ಘೋಷಿಸಿ ಸಂಸ್ಕೃತಿಯ ನಾಶಕ್ಕೆ ಕಾರಣವಾಗುತ್ತಾರೆ ಎಂಬ ಆಪಾದನೆಯೂ ಇದೆ. ಆದರೆ ಇದು ತೀರಾ ಹುರುಳಿಲ್ಲದ ಆಪಾದನೆ. ಅನೇಕ ಸ್ತ್ರೀವಾದಿಗಳು ವಿವಾಹಿತರೂ ಹೌದು ತಾಯಂದಿರೂ ಹೌದು. ಸ್ತ್ರೀವಾದದ ಹೋರಾಟ ಇರುವುದು ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ. ಪುರುಷ ಪ್ರಧಾನ ವ್ಯವಸ್ಥೆ ಎಂದರೆ ಪುರುಷಕೇಂದ್ರಿತ ಮೌಲ್ಯಗಳನ್ನು ಎತ್ತಿ ಹಿಡಿಯುವ ವ್ಯವಸ್ಥೆ ಎಂದರ್ಥವೇ ಹೊರತು ಎಲ್ಲ ಪುರುಷರು ಎಂದಾಗಲೀ ಪುರುಷರು ಮಾತ್ರವೆಂದಾಗಲೀ ಇದರರ್ಥವಲ್ಲ. ಎಷ್ಟೋ ಬಾರಿ ಅನೇಕ ಪುರುಷರು ಸ್ತ್ರೀಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅನೇಕ ಸ್ತ್ರೀಯರು ಪುರುಷ ಪ್ರಧಾನ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆದರೆ ಅವರು ಪುರುಷ ಪ್ರಧಾನ ಮೌಲ್ಯ ವ್ಯವಸ್ಥೆಯ ಕೈಗೊಂಬೆಗಳಾಗಿರುತ್ತಾರೆಂಬುದನ್ನು ಮರೆಯುವಂತಿಲ್ಲ.

ನಿಮ್ಮ ಪ್ರತಿಕ್ರಿಯೆ

  ಹೆಸರು*
  ಇ-ಮೇಲ್*
Type in Kannada (Press Ctrl+g to toggle between English and Kannada)